ಗೊದ್ಲೆ ಮೀನು-
ಸೈಲ್ಲೂರಿಫಾರ್ಮಿಸ್ ಗಣದ ಸೈಲ್ಯೂರಿಡೆ ಕುಟುಂಬಕ್ಕೆ ಸೇರಿದ ಒಂದು ಬಗೆಯ ಸಿಹಿನೀರು ಮೀನಿಗಿರುವ ಸಾಮಾನ್ಯ ಹೆಸರು. ಓಂಪಾಕ್ ಬೈಮ್ಯಾಕ್ಯುಲೇಟಸ್ ಇದರ ವೈಜ್ಞಾನಿಕ ನಾಮ. ಮೀಸೆ ಮೀನು (ಕ್ಯಾಟ್ ಫಿಶ್) ಗಳ ಹತ್ತಿರದ ಸಂಬಂಧಿ. ದೊಮ್ಮೆ ಮೀನು ಪರ್ಯಾಯ ನಾಮ. ಏಷ್ಯದ ಆಫ್ಘಾನಿಸ್ಥಾನದದಿಂದ ಹಿಡಿದು ಚೀನ, ಭಾರತ ತೈಲ್ಯಾಂಡ್ ದೇಶಗಳಲ್ಲಿ ಕಂಡು ಬರುತ್ತದೆ. ಇದು ಭಾರತದಾದ್ಯಂತ ಕಂಡುಬರುತ್ತದೆ. ಭಾರತದ ಪಶ್ಚಿಮ ಘಟ್ಟದಲ್ಲಿ ಈ ಮೀನು ವಿನಾಶದ ಅಂಚಿಗೆ ತಲುಪಿರುವುದಾಗಿ ವರದಿಯಾಗಿದೆ. ಕರ್ನಾಟಕದ ಕಾವೇರಿ ನದಿಯಲ್ಲಿ, ಅನೇಕ ಕೆರೆಗಳಲ್ಲಿ ಕಂಡುಬರುತ್ತವೆ. ಗರಿಷ್ಟ 45 ಸೆಂ.ಮೀ. ವರೆಗೆ ಬೆಲೆಯುವ ಮಧ್ಯಮ ಗಾತ್ರದ ಮೀನು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹ, ಎರಡು ಜೊತೆ ಮೀಸೆಗಳು, ಇವುಗಳಲ್ಲಿ ಒಂದು ಜೊತೆ ಗುದದ್ವಾರದ ಈಜುರೆಕ್ಕೆಯವರೆಗೂ ಚಾಚುವಂತಿರುವುದು, ಎದೆಯ ಈಜುರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆ, ಕಪ್ಪು ಬಣ್ಣದ ಪಟ್ಟೆಗಳು, ಮತ್ತು ಕಪ್ಪು ಅಂಚುಳ್ಳ ಗುದದ ಈಜು ರೆಕ್ಕೆ, ಕವಲೊಡೆದ ಬಾಲದ ಈಜು ರೆಕ್ಕೆ, ಇವು ಬೆಳ್ಳಿ ಬಣ್ಣದ ಗೊದ್ಲೆ ಮೀನಿನ ಪ್ರಮುಖ ಗುಣ ಲಕ್ಷಣಗಳು. 

ಗೊದ್ಲೆ ಮೀನಿನ ಆಹಾರ ಪ್ರಧಾನವಾಗಿ ನೀರಿನಲ್ಲಿರುವ ಚಿಗಟಗಳು, ಸಣ್ಣ ಮೃದ್ವಂಗಿಗಳು, ಕಠಿಣ ಚರ್ಮಿಗಳು, ಇತರೆ ಬಗೆಯ ಮೀನುಗಳು, ಇತ್ಯಾದಿ. ಇದರ ಸಂತಾನೋತ್ಪತ್ತಿಯ ಕಾಲ ಜೂನ್ ನಿಂದ ಆಗಸ್ಟ್ ವರೆಗೆ. ಇದು ಇತರೆ ಮೀನುಗಳಿಗೆ ಮಾರಕಾವಾದ್ದರಿಂದ ಈ ಮೀನು ಸಾಕಲು ಯೋಗ್ಯವಾಗಿಲ್ಲ. ಆದರೆ ಇದರ ಮಾಂಸ ರುಚಿಯಾಗಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದ್ದೆ ಇದೆ. ದಾವಣಿ ಬಲೆಗಳು, ಎಸೆ ಬಲೆಗಳ ಸಹಾಯದಿಂದ ಈ ಮೀನುಗಳನ್ನು ಹಿಡಿಯುತ್ತಾರೆ.
										(ಬಿ.ಎನ್.; ಟಿ.ಎಸ್.ವಿಶ್ವನಾಥ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ